ಮೊನ್ನೆ ಮಾರ್ಚ್ ಇಪ್ಪತ್ತೇಳರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಅದ್ಧೂರಿ ಸಮಾರಂಭವೊಂದು ನಡೆಯಿತು. ಕೊರವಂಜಿ ಮಾಸಪತ್ರಿಕೆಯ ೨೫ ವರ್ಷಗಳ ಎಲ್ಲಾ ಸಂಚಿಕೆಗಳನ್ನೊಳಗೊಂಡ ಸಿ.ಡಿ., ಹಾಗೂ ಅಪರಂಜಿ ಮಾಸಪತ್ರಿಕೆಯ ಅಂತರ್ಜಾಲ ತಾಣದ ಉದ್ಘಾಟನೆ ಇವುಗಳನ್ನು ಹಮ್ಮಿಕೊಂಡ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ವಿದ್ಯಾಭವನದ ಅಧ್ಯಕ್ಷರಾದ ಶ್ರೀ ಎನ್. ರಾಮಾನುಜ ಅವರು ವಹಿಸಿದ್ದರು. ಸಮಾರಂಭಕ್ಕೆ ಆಗಮಿಸಿದ್ದ ಸಭಿಕರನ್ನು ಅಪರಂಜಿ ಪತ್ರಿಕೆಯ ಸಂಪಾದಕರಾದ ಶ್ರೀ ಎಂ. ಶಿವಕುಮಾರ್ ಸ್ವಾಗತಿಸಿದ ನಂತರ, ಮಾನ್ಯ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಸಿ.ಡಿ. ಯನ್ನು ಬಿಡುಗಡೆ ಮಾಡಿದರು. ಅಂತರ್ಜಾಲ ತಾಣದ ಉದ್ಘಾಟನೆಯನ್ನು ಕೆನರಾ ಬ್ಯಾಂಕಿನ ನಿರ್ವಾಹಕ ನಿರ್ದೇಶಕರಾದ ಶ್ರೀ ಜಗದೀಶ ಪೈ ಅವರು ನೆರವೇರಿಸಿದರು. ಸರ್ವಶ್ರೀ ಮನು ಬಳಿಗಾರ್, ಅ.ರಾ.ಮಿತ್ರ, ಗುರುರಾಜ ಕರ್ಜಗಿ ಹಾಗೂ ಶ್ರೀನಿವಾಸ ವೈದ್ಯ ಇವರುಗಳ ಚೇತೋಹಾರಿ ಮಾತುಗಳು ಸಭಿಕರನ್ನು ರಂಜಿಸುವಲ್ಲಿ ಯಶಸ್ವಿಯಾದವು. ಅಪರಂಜಿ ಮಾಸಪತ್ರಿಕೆಯ ಉಪ ಸಂಪಾದಕರಾದ ಶ್ರೀ ಬೇಲೂರು ರಾಮಮೂರ್ತಿಯವರು, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಕಾರ್ಯಕ್ರಮವನ್ನು ನಡೆಸಲು ಸಹಾಯ ಹಸ್ತ ನೀಡಿದ ಭಾರತೀಯ ವಿದ್ಯಾಭವನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳಿಗೆ ಅಪರಂಜಿ ಬಳಗದ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.